ಕರಾವಳಿಯ ರಕ್ಷಣೆ (ಸಮರದಲ್ಲಿ) : ದೇಶ ಸಂರಕ್ಷಣಕಾರ್ಯದಲ್ಲಿ ತೀರ ಪ್ರದೇಶಗಳ ರಕ್ಷಣೆ ಪ್ರಮುಖವಾದುದು ಏಕೆಂದರೆ ಶತ್ರು ಯಾವಾಗ ಬೇಕಾದರೂ ತನ್ನ ಸೈನ್ಯವನ್ನು ತೀರಪ್ರದೇಶಗಳಲ್ಲಿ ತಂದಿಳಿಸಿ ರಾಜ್ಯವನ್ನು ಆಕ್ರಮಿಸಬಹುದು. ಪುರ್ವಕಾಲದಲ್ಲಿ ಹಡಗುಗಳು ಹೊರಗೆ ಹೊರಡದ ಹಾಗೆ ಮೊದಲು ರೇವುಪಟ್ಟಣಗಳನ್ನೂ ಬಂದರುಗಳನ್ನೂ ಮುತ್ತವುದು ಶತ್ರುವಿನ ಮುಖ್ಯೋದ್ದೇಶವಾಗಿತ್ತು. ಅಲ್ಲಿನ ನೌಕೆಗಳನ್ನು ನಾಶಮಾಡವುದಲ್ಲದೆ ಸಮುದ್ರವ್ಯಾಪಾರದಿಂದಲೇ ಜೀವಿಸುತ್ತಿದ್ದ ಆ ರಾಜ್ಯದ ಕೊರಳನ್ನೇ ಹಿಸುಕಲು ಶತ್ರು ಯತ್ನಿಸುತ್ತಿದ್ದ. ಈಗಲಾದರೋ ಪಟಗಳಿಂದ ನಾವೆಗಳನ್ನು ನಡೆಸುತ್ತಿಲ್ಲ; ಯಂತ್ರಗಳ ಸಹಾಯದಿಂದ ಹಡಗುಗಳು ವೇಗವಾಗಿ ಚಲಿಸಬಲ್ಲವು. ಆದ್ದರಿಂದ ರೇವುಪಟ್ಟಣಗಳೂ ಬಂದರುಗಳೂ ಶತ್ರುವಿನ ಗುರಿಗಳಾಗಬಹುದಾದರೂ ಅವನ್ನು ಆಕ್ರಮಿಸುವುದು ವೈರಿಯ ಮುಖ್ಯೋದ್ದೇಶವಲ್ಲ.

ಶತ್ರು ತೀರಪ್ರದೇಶಗಳಲ್ಲಿ ಬಂದಿಳಿಯುವುದು ಎಂದಿಗೂ ಒಂದು ದೊಡ್ಡ ವಿಪತ್ತೆಂದು ಪುರ್ವದಿಂದಲೂ ಎಣಿಸಲಾಗಿದೆ. ಆ ರಾಜ್ಯದ ಸರ್ಕಾರವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಶತ್ರುವಿಗೆ ಅದೊಂದೇ ಮಾರ್ಗವಾಗಿತ್ತು. ಪರಮಾಣು ಬಾಂಬಾಗಲೀ ಅಥವಾ ಇನ್ನಾವುದಾದರೂ ಪ್ರಳಯಾಂತಕ ಶಸ್ತ್ರಗಳಾಗಲೀ ಗ್ರಾಮಗಳನ್ನೂ ಪಟ್ಟಣಗಳನ್ನೂ ಧ್ವಂಸ ಮಾಡಿದರೂ ಗೆದ್ದ ರಾಜ್ಯವನ್ನು ಕೈಗೂಡಿಸಿಕೊಳ್ಳಲು ಪದಾತಿಸೈನ್ಯ ಬೇಕೇ ಬೇಕಾಗುತ್ತದೆ. ಈ ಕಾರ್ಯದಲ್ಲಿ ಸಮುದ್ರದ ಕಡೆಯಿಂದ ರಾಜ್ಯದೊಳಕ್ಕೆ ನುಗ್ಗಬೇಕಾಗ ಬಹುದು. ಕಳೆದ ಮಹಾಯುದ್ಧದಲ್ಲಿ ಮಿತ್ರಪಕ್ಷದವರು ನಾರ್ಮಂಡಿ ತೀರದಲ್ಲಿ ಬಂದಿಳಿದು ದೇಶದೊಳಕ್ಕೆ ನುಗ್ಗಿದ ಬಳಿಕವೇ ಆ ಯುದ್ಧ ಕೊನೆಗೊಂಡಿತು. ತಾನು ಗೆದ್ದ ಪ್ರದೇಶಗಳನ್ನು ರೂಢಿಸಿಕೊಳ್ಳುವುದೊಂದಕ್ಕೆ ಅಲ್ಲದೆ, ಶತ್ರುವನ್ನು ದಿಕ್ಕೆಡುವಂತೆ ಮಾಡಲು ನೌಕೆಗಳಿಂದ ತೀರ ಪಟ್ಟಣಗಳ ಮೇಲೆ ಗುಂಡುಗಳನ್ನು ಒಂದೇ ಸಮವಾಗಿ ಹಾರಿಸುವುದೂ ಮತ್ತು ಕೆಲವು ವೇಳೆ ತೀರಪ್ರದೇಶದಲ್ಲಿ ಸೈನ್ಯವನ್ನು, ತಂದಿಳಿಸುವುದೂ ಉಂಟು.

ಒಂದನೆಯ ಮಹಾಯುದ್ಧದಲ್ಲಿ ಜರ್ಮನಿಯ ಯುದ್ಧನೌಕೆ ಎಮ್ಡನ್ ಎಂಬುದು ಮದರಾಸಿನ ಹೈಕೋರ್ಟ್ ಕಟ್ಟಡದ ಮೇಲೆ ಸಿಡಿ ಚಿಪ್ಪನ್ನೆಸೆದು ಜನರನ್ನು ಹೇಗೆ ಗಾಬರಿಗೊಳಿಸಿತು ಎಂಬುದನ್ನು ಸ್ಮರಿಸಬಹುದು. ಎರಡನೆಯ ಮಹಾಯುದ್ಧದಲ್ಲಿ ಪುರ್ವತೀರದಲ್ಲಿ ಕೆಲವು ಜಪಾನೀ ಯುದ್ಧನೌಕೆಗಳು ಹಾಯ್ದು ಹೋಗುವುದನ್ನು ಕಂಡು ಶತ್ರುಗಳ ಪಡೆ ತೀರದಲ್ಲಿ ಇಳಿಯುತ್ತದೆಯೋ ಏನೋ ಎಂದು ಜನ ಎಷ್ಟು ಕಾತರಗೊಂಡರೆಂದರೆ, ಮದರಾಸಿನ ಅನೇಕ ಸರ್ಕಾರಿ ಕಚೇರಿಗಳನ್ನು ಒಳಭಾಗಕ್ಕೆ ರವಾನಿಸಿದರು ಮತ್ತು ಹಿಂದೆಂದೂ ಕಾಣದಷ್ಟು ಮಂದಿ ಒಳಗಡೆಯ ಹಳ್ಳಿಹಳ್ಳಿಗಳಿಗೂ ಗ್ರಾಮಗಳಿಗೂ ಸಾಗಿದರು.

ತೀರಪ್ರದೇಶಗಳಲ್ಲಿ ಸೈನ್ಯವನ್ನು ತಂದಿಳಿಸುವುದು ಕೆಲವು ವೇಳೆ ಜಯನಿಶ್ಚಯಕ್ಕಾದರೂ ಅದರ ಉದ್ದೇಶ ಶತ್ರುವನ್ನು ಗಾಬರಿಗೊಳಿಸುವುದು. ಎರಡನೆಯ ಮಹಾಯುದ್ಧದಲ್ಲಿ ಜರ್ಮನಿಯೂ ಬ್ರಿಟನ್ ದೇಶವನ್ನು ಸಮುದ್ರದ ಕಡೆಯಿಂದ ಆಕ್ರಮಿಸಲು ಯತ್ನಿಸಿತು. ಮತ್ತು ಜರ್ಮನ್ ಸೈನ್ಯವನ್ನು ಬ್ರಿಟಿಷ್ ನೌಕಾಬಲ ತಡೆಯಲಾರದೆಂದೂ ಘೋಷಿಸಿತು. ಆದರೆ ಮಿತ್ರಪಕ್ಷದವರು ಜರ್ಮನ್ನರ U ಬೋಟುಗಳನ್ನೂ ಲಿಟ್ವಾಫೆ ಎಂಬ ಪ್ರಬಲ ವೈಮಾನಿಕ ದಳವನ್ನೂ ಕಡೆಗಣಿಸಿ ಕಡಲ್ಗಾಲುವೆಯನ್ನು ದಾಟಲು ಸಾಧ್ಯವೆಂಬುದನ್ನು ತೋರಿಸಿಕೊಟ್ಟರು. ಅಲ್ಲದೆ ಹಿಟ್ಲರ್ ಯಾವುದನ್ನು ಅಟ್ಲಾಂಟಿಕ್ ಗೋಡೆ ಎಂದು ಭಾವಿಸಿದನೋ ಆ ವ್ಯೂಹವನ್ನೂ ಭೇದಿಸಿದರು.

ನಾರ್ಮಂಡಿ ತೀರದಲ್ಲಿ ಸೈನ್ಯವನ್ನು ತಂದಿಳಿಸಿದ ಮಹತ್ಕಾರ್ಯಕ್ಕಾಗಿ ಮಿತ್ರ ಪಕ್ಷದವರ ಜಯಭೇರಿ ಎಲ್ಲೆಲ್ಲೂ ಮೊಳಗಿತಲ್ಲದೆ ಜರ್ಮನ್ನರು ಅಷ್ಟೂ ಕಳೆಗುಂದಿದರು. ಅಟ್ಲಾಂಟಿಕ್ ಗೋಡೆ ಕುಸಿಯಿತು.

ಆದ್ದರಿಂದ ಎಂಥ ಯುದ್ಧತಂತ್ರದಲ್ಲಿಯೂ ಶತ್ರುವಿನ ಮುತ್ತಿಗೆಗೆ ಎಡೆಗೊಡದ ಹಾಗೆ ತೀರವನ್ನು ಸಂರಕ್ಷಿಸುವುದು ಬಹಳ ಮುಖ್ಯವಾದ ಕೆಲಸವೆಂದು ಪರಿಗಣಿಸಬೇಕು. ದಡದ ಸಾಲೊಂದು ಬಂಗಾಲ ಕೊಲ್ಲಿ ಅಥವಾ ಅರಬ್ಬೀ ಸಮುದ್ರವಂಥ ವಿಶಾಲವಾದ ಕಡಲಿಗೆ ಎದುರಾಗಿದ್ದರೆ ಅದರ ಸಂರಕ್ಷಣೆಯಂತೂ ಬಹಳ ಮುಖ್ಯ, ಭಾರತ ದೇಶ ಪರ್ಯಾಯದ್ವೀಪವಾಗಿರುವುದರಿಂದ ಅದು ತನ್ನ ತೀರಪ್ರದೇಶಗಳಲ್ಲಿ ಬಗೆಬಗೆಯಾಗಿರುವ ಪ್ರಶಸ್ತ ರಕ್ಷಣಸ್ಥಾನಗಳನ್ನು ಸ್ಥಾಪಿಸಿ ಅವುಗಳ ಸಂರಕ್ಷಣೆಗೆ ಏರ್ಪಡಿಸುವುದು ಶಕ್ಯ. ಪುರ್ವಕಾಲದಲ್ಲಿ ರೇವುಪಟ್ಟಣಗಳನ್ನೂ ಬಂದರುಗಳನ್ನೂ ಅವುಗಳ ಸುತ್ತಲೂ ಗೋಡೆಯನ್ನು ಹಾಕಿಯೋ ಕೋಟೆಯನ್ನು ಕಟ್ಟಿಯೋ ಸಂರಕ್ಷಿಸುವುದು ಸುಲಭವಾಗಿತ್ತು. ಈಗ ಹಡಗುಗಳು ಯಂತ್ರಗಳಿಂದ ಚಲಿಸುವುದರಿಂದಲೂ ಅವುಗಳನ್ನು ಬಹುದೂರಕ್ಕೆ ಗುಂಡುಗಳನ್ನು ಎಸೆಯಬಲ್ಲ ಭಾರಿ ಫಿರಂಗಿಗಳಿರುವುದರಿಂದಲೂ ಕೋಟೆಗೋಡೆಗಳು ಅಷ್ಟಾಗಿ ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ ಈಗ ತೀರಪ್ರದೇಶದ ರಕ್ಷಣೆಗಾಗಿ ಸಮೀಪಿಸುತ್ತಿರುವ ಶತ್ರುನೌಕೆಗಳನ್ನು ಅವು ಅಷ್ಟು ದೂರದಲ್ಲಿರುವಾಗಲೇ ಧ್ವಂಸ ಮಾಡಲು ದೊಡ್ಡ ದೊಡ್ಡ ಫಿರಂಗಿಗಳು ಆವಶ್ಯಕವೆನಿಸಿವೆ. ಇದ್ದಕ್ಕಿದ್ದ ಹಾಗೆ ಶತ್ರು ಮೇಲೆಬಿದ್ದರೆ ಅವನನ್ನು ನಿಗ್ರಹಿಸಲು ಸಮರ್ಥರಾದ ಭಂಟರಿಂದ ಈ ಫಿರಂಗಿ ಸೈನ್ಯ ಕೂಡಿರಬೇಕಲ್ಲದೆ ಬೇಗ ಚಲಿಸಲೂ ಸಮರ್ಥವಾಗಿರಬೇಕು. ಅವರ ಆಯುಧಗಳು ಶತ್ರುನೌಕಾಬಲದ ಯಾವ ಶಸ್ತ್ರವನ್ನಾಗಲೀ ಎದುರಿಸಲು ತಕ್ಕವಾಗಿರಬೇಕು.

ಶತ್ರುನೌಕೆಯಿಂದ ಹೊರಡುವ ಗುಂಡಿನ ಸುರಿಮಳೆಗೆ ಉತ್ತರವಾಗಿ ತೀರದಲ್ಲಿರುವ ಭಾರಿ ಭಾರಿ ಫಿರಂಗಿಗಳಿಂದ ಗುಂಡುಗಳನ್ನು ಹೊಡದರೆ ಮಾತ್ರ ಸಾಲದೆಂಬ ಅಂಶ ನಾರ್ಮಂಡಿ ತೀರದ ಆಕ್ರಮಣದಲ್ಲಿ ವಿಶದವಾಯಿತು. ಆ ಶೂನ್ಯ ದಿನದ ನಿಶ್ಚಿತ ಸಮಯದಲ್ಲಿ ಮಿತ್ರಪಕ್ಷದವರು ದಡದಲ್ಲಿ ಇಳಿಯುವುದಕ್ಕೆ ಮುಂಚೆ ಬಾಂಬಿನ ಮಳೆಗರೆಯಲು ಪ್ರಾರಂಭಿಸಿದಾಗ, ಜರ್ಮನ್ನರ ಫಿರಂಗಿಗಳ ಸಾಲು ನಿರುಪಯುಕ್ತವಾಯಿತು. ತೀರಾವತರಣ ಸೈನ್ಯ ಆಗಮಿಸುವುದಕ್ಕೆ ಮುಂಚೆ, ಬಂದಿಳಿದ ಮೇಲೆ ಅದರ ತರುವಾಯ ಕೂಡ ಹತ್ತು ಸಾವಿರ ಟನ್ನುಗಳಷ್ಟು ಬಾಂಬುಗಳನ್ನು ಅಂತರಿಕ್ಷ ಸಿಡಿಚಿಪ್ಪುಗಳನ್ನು ನೌಕೆಯ ಫಿರಂಗಿಗಳಿಂದಲೂ ಶತ್ರುವಿನ ಫಿರಂಗಿಸಾಲುಗಳ ಮೇಲೆ ಎಸೆಯಲಾಯಿತು. ಜರ್ಮನಿಯ ಸೈನ್ಯದ ಮುಖ್ಯಕಚೇರಿಗೂ ಬೆರಗು ಬಡಿಯುವಂತೆ ಈ ಆಕ್ರಮಣ ಹಗಲಲ್ಲೇ ಜರುಗಿತು. ಶತ್ರುಗಳ ಫಿರಂಗಿಗಳ ಸದ್ದನ್ನಡಗಿಸಲೂ ಮಲೆಕೋಡುಗಳನ್ನು ಹತ್ತಲೂ ಸಾಧ್ಯವಾಗುವಂತೆ ಕೆಲವು ರೇಂಜರುಗಳೂ ಕಮಾಂಡೋಗಳೂ ಬೆಳಕು ಹರಿಯುವುದಕ್ಕೆ ಮುಂಚೆ ದಡದಲ್ಲಿ ಬಂದಿಳಿದರೇ ಹೊರತು, ಮಿಕ್ಕವರು ನೆಲದೊಳಗೆ ಸಿಡಿಯುವ ಮೈನುಗಳೆಂಬ ಮದ್ದುಗಳನ್ನು ಗುಡಿಸಿ ಹಾಕಲೂ ಇರುಳಿನಲ್ಲಿ ಬಾಂಬುಗಳ ಮತ್ತು ಸಿಡಿಚಿಪ್ಪುಗಳ ಹೊಡೆತದಿಂದ (ತಪ್ಪಿಸಿಕೊಂಡ ಅಲ್ಪಸ್ವಲ್ಪ ಫಿರಂಗಿಗಳನ್ನು ಶಾಂತಗೊಳಿಸಲೂ) ಉಷಃಕಾಲದ ಬೆಳಕಿನಲ್ಲಿಯೇ ದಡಕ್ಕೆ ಬಂದಿಳಿದರು.
ತೀರ ಪ್ರದೇಶದ ಮೇಲೆ ಶತ್ರುವಿನ ದಾಳಿ ನೆಲದ ಕಡೆಯಿಂದಾಗಲೀ ಕಡಲ ಕಡೆಯಿಂದಾಗಲೀ ಅಥವಾ ಅಂತರಿಕ್ಷದಿಂದಾಗಲೀ ನಡೆಯಬಹುದು. ಇತೋಪ್ಯತಿಶಯವಾಗಿ, ಈ ದಾಳಿ ಬೇರೆಬೇರೆಯಾಗಿರಬಹುದು ಅಥವಾ ಕಲೆತಿರಲೂಬಹುದು; ಆಧುನಿಕ ತೀರಾಕ್ರಮಣದಲ್ಲಿ. ನೆಲದಿಂದಲಾಗಲೀ ಕಡಲಿನಿಂದಾಗಲೀ ದಾಳಿ, ನಡೆಯುವುದು ಸಾಧ್ಯವಾಗದಿರಬಹುದು. ಆದರೆ ನೆಲ ಮತ್ತು ಅಂತರಿಕ್ಷ ಇವೆರಡು ಕಡೆಗಳಿಂದಲೂ ಒಟ್ಟಿಗೆ ಅಥವಾ ಕಡಲು ಮತ್ತು ಅಂತರಿಕ್ಷ ಇವೆರಡು ಕಡೆಗಳಿಂದಲೂ ಒಟ್ಟಿಗೆ ಅಥವಾ ಬರಿ ಅಂತರಿಕ್ಷದಿಂದ ಮಾತ್ರವೇ ದಾಳಿ ನಡೆಸುವ ಕ್ರಮ ಸಲ್ಲದೆನ್ನುವಂತಿಲ್ಲ. ನಮ್ಮ ಹಡಗುಪಡೆಗಳೂ ವಿಮಾನಬಲ್ಲವೂ ಶತ್ರುವಿನ ನೌಕೆಗಳನ್ನು ಸಮುದ್ರದಲ್ಲಿ ಧ್ವಂಸ ಮಾಡಬಹುದಾದರೂ ನಮ್ಮ ತೀರ ಸಂರಕ್ಷಣೆಯ ಬಹಳ ಪಾಲು ಹೊಣೆ ಭೂಸೈನ್ಯದ ಮೇಲೆ ಸಹಜವಾಗಿಯೇ ಬೀಳುತ್ತದೆ. ನಮ್ಮ ರಕ್ಷಣಾದಳ ತೀರದುದ್ದಕ್ಕೂ ಬಹಳ ಜಾಗರೂಕವಾಗಿರುವುದು ಅತ್ಯವಶ್ಯಕ. ಯಂತ್ರಮಯವಾಗಿರುವ ಆಧುನಿಕ ಯುದ್ಧದಲ್ಲಿ, ತೀರಪ್ರದೇಶದಲ್ಲಿ ಇಂಥ ಜಾಗದಲ್ಲೇ ಶತ್ರು ಬಂದಿಳಿಯುತ್ತಾನೆಂದು ಬೆರಳಿಟ್ಟು ಹೇಳುವ ಹಾಗಿಲ್ಲ. ಯಾವ ಸ್ಥಳದಲ್ಲಿ ಇಳಿಯುವುದು ಅಸಂಭವವೆಂದು ನಾವು ಭಾವಿಸಿದ್ದೆವೋ ಅದೇ ಸ್ಥಳದಲ್ಲಿ ಹಗೆ ಬಂದಿಳಿಯಬಹುದು. ಆದರೂ ತೀರದುದ್ದಕ್ಕೂ ಚೀನ ಗೋಡೆಯ ಹಾಗೆ ಒಂದು ಗೋಡೆಯನ್ನು ಕಟ್ಟುವುದೂ ಹುಚ್ಚುತನದ ಕೆಲಸ. ಇಂಥ ದುರ್ಗಗಳನ್ನು ಕಟ್ಟುವುದಕ್ಕೆ ಅತ್ಯಧಿಕವಾಗಿ ಹಣ ಖರ್ಚಾಗುವುದಲ್ಲದೆ ಅವುಗಳ ಸಂರಕ್ಷಣೆಗೆ ಜನವೂ ಬೇಕಾಗುತ್ತದೆ. ಇಷ್ಟಾದರೂ ಆಧುನಿಕ ಯುದ್ಧಕ್ರಮದಲ್ಲಿ ಅವು ಫ್ರೆಂಚರು ಕಟ್ಟಿದ ಮಾಜಿನೊಲೈನಿನಂತೆ ನಿರರ್ಥಕವಾಗುತ್ತದೆ.

ಆದ್ದರಿಂದ ಕರಾವಳಿ ಪ್ರದೇಶದ ಸಂರಕ್ಷಣೆಗೆ ಮುಖ್ಯವಾಗಿ ಅಂಶಗಳಿಷ್ಟು : 1 ಸೈನ್ಯದ ಸಮಸ್ತಾಂಗದ ಪಡೆಗಳನ್ನು ಆಯಕಟ್ಟಾದ ಜಾಗಗಳಲ್ಲಿರಿಸಿ, ಅವುಗಳು ವೇಗದಿಂದ ಚಲಿಸುವ ಹಾಗೆ ಚಲನಸಾಧನೆಗಳಿಂದ ಸಜ್ಜುಗೊಳಿಸಿ, ಬೇಕಾದಾಗ ವಿಮಾನ ಮತ್ತು ನೌಕಾಬಲದೊಡನೆ ಹೊಂದಿಕೊಳ್ಳುವ ಹಾಗೆ ಶಿಕ್ಷಣವನ್ನು ಕೊಡಬೇಕು. 2 ರೈಲು ಕಂಬಿಗಳ ಮೇಲೆ ಚಲಿಸಬಲ್ಲಂಥ ಫಿರಂಗಿಗಳೂ ವಿಮಾನಗಳನ್ನೂ ಗುಂಡಿಟ್ಟು ಹೊಡೆಯುವ ಸಾಧನಗಳನ್ನೂ ಇರಬೇಕು. 3 ರಾಡರುಗಳೂ ಶೋಧಕ ದೀಪಗಳೂ ಬೇಕು. 4 ಎಚ್ಚರಿಕೆಯನ್ನು ಕೊಡಲು ತಕ್ಕ ವ್ಯವಸ್ಥೆ ಪೋಣಿಕೆಗೊಂಡಿರಬೇಕು. 5 ಅಂತರಿಕ್ಷದಲ್ಲೂ ಸಮುದ್ರದಲ್ಲೂ ಕಾಪುದಳ ಗಸ್ತು ತಿರುಗುತ್ತಿರಬೇಕು. 6 ನೀರಿನಲ್ಲೂ ನೆಲದಲ್ಲೂ ಗುಪ್ತವಾಗಿ ಸಿಡಿಮದ್ದನ್ನು ಅವಿತಿಡುವ ಏರ್ಪಾಡಾಗಬೇಕು. 7 ನೌಕಾ ಮತ್ತು ವಿಮಾನಗಳ ಪಡೆಗಳು ಹೊಂಚುಹಾಕುತ್ತ ಪ್ರತಿಕ್ರಿಯೆಯನ್ನು ಕೈಗೊಳ್ಳುವಂತಿರಬೇಕು. ಇವಿಷ್ಟು ತೀರ ಪ್ರದೇಶ ಸಂರಕ್ಷಣೆಗೆ ಕನಿಷ್ಠ ಪಕ್ಷ ಬೇಕೇ ಬೇಕು.                           (ಎ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ